Psalms 15

ಯೆಹೋವನ ಸನ್ನಿಧಿಗೆ ಬರಲು ಯೋಗ್ಯರಾದವರು

ದಾವೀದನ ಕೀರ್ತನೆ.

1ಯೆಹೋವನೇ, ನಿನ್ನ ಗುಡಾರದಲ್ಲಿ ಇಳಿದುಕೊಂಡಿರುವುದಕ್ಕೆ ಯಾರು ಯೋಗ್ಯರು?
ನಿನ್ನ ಪರಿಶುದ್ಧಪರ್ವತದಲ್ಲಿ ವಾಸಿಸತಕ್ಕವನು ಎಂಥವನಾಗಿರಬೇಕು?
2 ಅವನು ಸಜ್ಜನನೂ, ನೀತಿವಂತನೂ,
ಮನಃಪೂರ್ವಕವಾಗಿ ಸತ್ಯದ ಮಾತುಗಳನ್ನಾಡುವವನೂ ಆಗಿರಬೇಕು.

3

ಅವನು ಚಾಡಿಯನ್ನು ಹೇಳದವನೂ,

ಮತ್ತೊಬ್ಬರಿಗೆ ಅನ್ಯಾಯ ಮಾಡದವನೂ,
ಯಾರನ್ನೂ ನಿಂದಿಸದವನೂ ಆಗಿರಬೇಕು.

4

ಅವನು ಭ್ರಷ್ಟರನ್ನು ಬಿಟ್ಟುಬಿಟ್ಟವನೂ,

ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಸನ್ಮಾನಿಸುವವನೂ,
ನಷ್ಟವಾದರೂ ಪ್ರಮಾಣತಪ್ಪದವನೂ ಆಗಿರಬೇಕು.
5 ಅವನು ಸಾಲಕ್ಕೆ ಬಡ್ಡಿ ಕೇಳದವನೂ,
ನಿರಪರಾಧಿಯ ಕೇಡಿಗಾಗಿ ಲಂಚವನ್ನು ತೆಗೆದುಕೊಳ್ಳದವನೂ ಆಗಿರಬೇಕು.
ಇಂಥವನು ಎಂದಿಗೂ ಕದಲುವುದಿಲ್ಲ.

Copyright information for KanULB